ನಾಸ್ತಿಕವಾದ
	ದೇವರ ಅಸ್ತಿತ್ವದಲ್ಲಿ, ದೇವರನ್ನು ಕುರಿತ ಆಧಾರಗ್ರಂಥಗಳಲ್ಲಿ ನಂಬಿಕೆ ಇಲ್ಲದವರನ್ನು ನಾಸ್ತಿಕರೆನ್ನುತ್ತಾರೆ. ಅವರ ವಾದವೇ ನಾಸ್ತಿಕವಾದ. ಕ್ರೈಸ್ತೇತರರನ್ನೆಲ್ಲ ಕ್ರೈಸ್ತರು ನಾಸ್ತಿಕರೆಂದು (ಇನ್‍ಫಿಡೆಲ್) ಭಾವಿಸುತ್ತಾರೆ. ಕ್ರೈಸ್ತಮತಕ್ಕೆ ಬೈಬಲ್ ಆಧಾರ. ಬೈಬಲ್‍ನಲ್ಲಿ ನಂಬಿಕೆ ಇಲ್ಲದವರೂ ಬೈಬಲಿನಲ್ಲಿ ಉಕ್ತವಾಗಿರುವಂತೆ ಯೇಸುಕ್ತಿಸ್ತ ದೇವಪುತ್ರನೆಂದು ನಂಬದವರೂ ನಾಸ್ತಿಕರು. ಕ್ರೈಸ್ತರ ಪ್ರಕಾರ ಒಬ್ಬ ಆಸ್ತಿಕನಾಗಬೇಕಾದರೆ ಏಕೀಶ್ವರವಾದದಲ್ಲಿ ನಂಬಿಕೆ ಇದ್ದರೆ ಮಾತ್ರ ಸಾಲದು. ಯೆಹೂದ್ಯರು ಏಕೀಶ್ವರವಾದಿಗಳಾದರೂ ಅವರನ್ನು ಕ್ರೈಸ್ತರು ಆಸ್ತಿಕರೆಂದು ಭಾವಿಸುವುದಿಲ್ಲ. ಏಕೆಂದರೆ ಯಹೂದ್ಯರು ಕ್ರೈಸ್ತನನ್ನು ಒಬ್ಬ ಪ್ರವಾದಿಯೆಂದು ಭಾವಿಸುತ್ತಾರೆಯೇ ಹೊರತು ಅವನನ್ನು ದೇವಪುತ್ರನೆಂಬುದನ್ನೂ ಅವನು ದೇವಪುತ್ರನೆಂದು ಘೋಷಿಸಿರುವ ಹೊಸ ಒಡಂಬಡಿಕೆಯನ್ನೂ ಅವರು ನಿರಾಕರಿಸುತ್ತಾರೆ. ಆದ್ದರಿಂದ ಕ್ರೈಸ್ತರ ಪ್ರಕಾರ ಒಬ್ಬನು ಆಸ್ತಿಕನೆಂದು ಅಂಗೀಕೃತವಾಗಬೇಕಾದರೆ ಏಕೀಶ್ವರವಾದವನ್ನು ಒಪ್ಪುವುದರ ಜೊತೆಗೆ ಹೊಸ ಒಡಂಬಡಿಕೆಯನ್ನೂ ಅದರಲ್ಲಿ ಉಕ್ತವಾಗಿರುವ ತ್ರಿಮೂರ್ತಿ ದೈವಭಾವನೆಯನ್ನೂ ಒಪ್ಪಬೇಕು.

	ಭಾರತೀಯ ವೈದಿಕರು ಆಸ್ತಿಕತ್ವಕ್ಕೆ ಕ್ರೈಸ್ತರಂತೆ ಏಕೀಶ್ವರಭಾವನೆ ಅಗತ್ಯವೆಂದು ಭಾವಿಸುವುದಿಲ್ಲ. ಭಾರತೀಯ ವೈದಿಕ ತತ್ತ್ವಸಾಹಿತ್ಯದಲ್ಲಿ ವೇದದಲ್ಲಿ ನಂಬಿಕೆ ಇಲ್ಲದವನನ್ನೂ ಕರ್ಮ ಮತ್ತು ಪುನರ್ಜನ್ಮಗಳಲ್ಲಿ ನಂಬಿಕೆ ಇಲ್ಲದವನನ್ನೂ ನಾಸ್ತಿಕನೆಂದು ಕರೆಯುವುದು ರೂಢಿಯಲ್ಲಿದೆ. ಈ ಮೂರರಲ್ಲಿ ಯಾವುದಾದರೊಂದನ್ನು ನಿರಾಕರಿಸಿದರೂ ಅದು ನಾಸ್ತಿಕವಾಗುತ್ತದೆ. ವೇದವನ್ನು ಪ್ರಮಾಣವಾಗಿ ಒಪ್ಪದ ಬೌದ್ಧರು ಮತ್ತು ಜೈನರು ಕರ್ಮ ಮತ್ತು ಪುನರ್ಜನ್ಮ ಭಾವನೆಗಳನ್ನು ಒಪ್ಪಿದರೂ ಅವರು ಆಸ್ತಿಕ ಪಟ್ಟಕ್ಕೆ ಅರ್ಹರಲ್ಲವೆಂದು ವೈದಿಕರು ಭಾವಿಸುತ್ತಾರೆ.

	ಕ್ರೈಸ್ತರೂ ಮುಸ್ಲಿಮರೂ ದೈವವನ್ನು ನಂಬಿರುತ್ತಾರಾದರೂ ಕರ್ಮ ಪುನರ್ಜನ್ಮ ಮತ್ತು ವೇದ ಪ್ರಮಾಣಗಳನ್ನು ಅವರು ನಿರಾಕರಿಸುವುದರಿಂದ ವೈದಿಕರು ಅವರನ್ನು ನಿರೀಶ್ವರವಾದಿಗಳೆಂದು ಭಾವಿಸುತ್ತಾರೆ. ಬೌದ್ಧರ ಚೈತ್ಯಗಳನ್ನೂ ಜೈನರ ಬಸದಿಗಳನ್ನೂ ಮುಸ್ಲಿಮರ ಮಸೀದಿಗಳನ್ನೂ ಕ್ರೈಸ್ತರ ಚರ್ಚುಗಳನ್ನೂ ನಾಸ್ತಿಕಾಲಯಗಳೆಂದು ವೈದಿಕರು ಕರೆದಿದ್ದಾರೆ. ಸಾಂಖ್ಯದಾರ್ಶನಿಕರು ಈಶ್ವರಭಾವನೆ ಅಸಿದ್ಧವೆಂದು ಭಾವಿಸಿದರೂ ಪೂರ್ವ ಮೀಮಾಂಸಾ ದಾರ್ಶನಿಕರು ನಿರೀಶ್ವರವಾದಿಗಳಾದರೂ ಅವರು ಕರ್ಮತತ್ತ್ವವನ್ನೂ ಪುನರ್ಜನ್ಮ ತತ್ತ್ವವನ್ನೂ ವೇದ ಪ್ರಾಮಾಣ್ಯವನ್ನೂ ಅಂಗೀಕರಿಸಿರುತ್ತಾರಾದುದರಿಂದ ಅವರನ್ನು ವೈದಿಕರು ಆಸ್ತಿಕರೆಂದು ಭಾವಿಸುತ್ತಾರೆ.				(ನೋಡಿ- ಆಸ್ತಿಕ್ಯ-ಮತ್ತು-ನಾಸ್ತಿಕ್ಯ)
(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ